ನುಗ್ಗಿ ನಡೆ ಮುಂದೆ
ಜಗ್ಗದೆಯೆ ಕುಗ್ಗದಯೆ
ಹಿಗ್ಗಿ ನಡೆ ಮುಂದೆ …. ”
ನಮ್ಮ ರಾಷ್ಟ್ರಕವಿ ಕುವೆಂಪು ಅವರ ಮೇಲಿನ ಕವನದ ಸ್ಪೂರ್ತಿಯಿಂದ ಹಾಗೂ ನಿಮ್ಮೆಲ್ಲರ ಆದರ, ಅಭಿಮಾನ ಮತ್ತು ಭರವಸೆಗಳಿಂದ ೪ನೇ ವಿಶ್ವ ಕನ್ನಡ ಸಮಾವೇಶ (ನಾವಿಕ ೨೦೧೭) ಈ ವರ್ಷದ ಸೆಪ್ಟೆಂಬರ್ ೧, ೨ ಮತ್ತು ೩ ರಂದು ಟೆಕ್ಸಾಸ್ ರಾಜ್ಯದ ಡಾಲ್ಲಸ್ ಮಹಾನಗರದಲ್ಲಿ ನಡೆಯಲಿದೆಯೆಂದು ತಿಳಿಸಲು ನನಗೆ ಹೆಮ್ಮೆ ಎನಿಸುತ್ತಿದೆ. ಈ ಸಮಾವೇಶಕ್ಕೆ ನನ್ನನ್ನು ಅಧ್ಯಕ್ಷಳನ್ನಾಗಿ ಆಯ್ಕೆ ಮಾಡಿ ನನಗೆ ಸಮಾವೇಶದ ಕಾರ್ಯನಿರ್ವಹಣೆಯ ಜೊತೆಗೆ ತಾಯಿ ಭುವನೇಶ್ವರಿಯ ಸೇವೆ ಮಾಡುವ ಸದಾವಕಾಶ ಕಲ್ಪಿಸಿಕೊಟ್ಟಿದ್ದಕ್ಕೆ ನಿಮ್ಮೆಲ್ಲರಿಗೂ ನಾನು ಚಿರರುಣಿಯಾಗಿದ್ದೇನೆ.
ಬಹು ದೂರದ ಅಮೇರಿಕಕ್ಕೆ ಬಂದು ನೆಲೆಸಿರುವ ಅಸಂಖ್ಯಾತ ಕನ್ನಡಿಗರೆಲ್ಲರ ಒಗ್ಗಟ್ಟು ಮತ್ತು ಸಹಕಾರದಿಂದ ಡಾಲ್ಲಸ್ ನಗರದಲ್ಲಿ ಕನ್ನಡದ ತೇರನ್ನ ಎಳೆಯುವ ನಮ್ಮೆಲ್ಲರ ಪ್ರಯತ್ನ ಖಂಡಿತವಾಗಿಯೂ ಯಶಸ್ವಿಯಾಗುತ್ತದೆಂದು ನನ್ನಲ್ಲಿ ಭರವಸೆ ಇದೆ. ಮುಂಬರುವ ಈ ಸಮ್ಮೇಳನದಲ್ಲಿ ಸಿರಿಗನ್ನಡದ ಕಲೆ, ಸಾಹಿತ್ಯ, ಚಲನ ಚಿತ್ರ, ಸಂಸ್ಕೃತಿ ಮತ್ತು ಸಮೃದ್ಧ ಪರಂಪರೆಯನ್ನ ಪ್ರದರ್ಶಿಸಿ ನಿಮ್ಮನ್ನೆಲ್ಲ ರಂಜಿಸಲು ಕರ್ನಾಟಕ ಹಾಗೂ ಜಗತ್ತಿನ ಎಲ್ಲ ಕಡೆಯಿಂದ ಕಲಾವಿದರು ಆಗಮಿಸಿ ಪಾಲ್ಗೊಳ್ಳಲಿದ್ದಾರೆ. ಪ್ರಖ್ಯಾತ ಕವಿಗಳು, ಸಾಹಿತಿಗಳು, ಕಲಾವಿದರು ಮತ್ತು ಕನ್ನಡ ಚಿತ್ರ ರಂಗದ ನಿಮ್ಮ ನೆಚ್ಚಿನ ನಟ ನಟಿಯರು ಬಂದು ಸಮ್ಮೇಳನಕ್ಕೆ ಮೆರಗು ನೀಡಲಿದ್ದಾರೆ. ಈಗಾಗಲೇ ಸ್ವಯಂಸೇವಕ ತಂಡಗಳು ಸಮ್ಮೇಳನದ ನಾನಾ ಜವಾಬ್ದಾರಿ ವಹಿಸಿಕೊಂಡು ನಿಮ್ಮ ಸೇವೆಗೆ ತಯಾರಾಗುತ್ತಿದ್ದಾರೆ. ಇದೆಲ್ಲದರ ಜೊತೆಗೆ ಸಮ್ಮೇಳನ ಪೂರ್ತಿ ಎಲ್ಲರಿಗೂ ರುಚಿಯಾದ ಸಾಂಪ್ರದಾಯಿಕ ಕರ್ನಾಟಕದ ತಿನಿಸುಗಳ್ಳನ್ನ ಒದಗಿಸೋ ಸಿದ್ಧತೆಗಳೂ ಭರದಿಂದ ನಡೆಯುತ್ತಿವೆ.
ಮತ್ತೊಮ್ಮೆ ಡಾಲ್ಲಸ್ ನಗರದ ಸಂಚಾಲಕ ತಂಡದ ಪರವಾಗಿ ನಿಮ್ಮೆಲ್ಲರಿಗೂ ಆದರದ ಸ್ವಾಗತವನ್ನ ಕೋರುತ್ತಿದ್ದೇನೆ. ತಾವೆಲ್ಲರೂ ಆಗಮಿಸಿ ಈ ಸಡಗರ ಮತ್ತು ಸಂಭ್ರಮದಲ್ಲಿ ಪಾಲ್ಗೊಂಡು ಸಮಾವೇಶವನ್ನ ಯಶಸ್ವಿಯಾಗಿ ನೆರವೇರಿಸಿ ಕನ್ನಡಾಂಬೆಯ ಸೇವೆ ಮಾಡಬೇಕೆಂದು ಆಶಿಸುತ್ತೇನೆ.
ತಮ್ಮ ವಿಸ್ವಾಸಿ,
ಅನು ಬೆನಕಟ್ಟಿ